1961-. ಅಮೆರಿಕದ ಖ್ಯಾತ ಅಥ್ಲೀಟ್. ಅಲಬಾಮದ ಬರ್ಮಿಂಗ್‍ಹ್ಯಾಮ್‍ನಲ್ಲಿ 1961ರಲ್ಲಿ ಜನಿಸಿದ. ತಂದೆ ಬಿಲ್ ಮತ್ತು ತಾಯಿ ಎವ್ಲಿನ್. ಇಬ್ಬರೂ ಶಿಕ್ಷಕರು ಹಾಗೂ ಕ್ರೀಡಾಪಟುಗಳಾಗಿದ್ದರು. ತಂದೆ ಬಿಲ್ ಫುಟ್‍ಬಾಲ್ ಆಟಗಾರ, ತಾಯಿ 80 ಮೀ ಹರ್ಡಲ್ಸ್‍ನಲ್ಲಿ ಹೆಸರು ಮಾಡಿದ್ದಳು. 1963ರಲ್ಲಿ ಇವರ ಕುಟುಂಬ ನ್ಯೂಜೆರ್ಸಿಗೆ ಬಂತು. ಕಾರ್ಲ್ ಮತ್ತು ಇವನ ತಂಗಿ ಕರೋಲ್ ತಂದೆ ತಾಯಿಯರ ಪ್ರೇರಣೆ ಪಡೆದರು. ಮನೆಯ ಹಿಂದಿನ ಅಂಗಳದಲ್ಲೇ ಉದ್ದಜಿಗಿತದ ಒಂದು ಪಿಟ್ ತಯಾರಿಸಿಕೊಂಡರು. ಜೆಸ್ಸಿ ಓವನ್ಸ್‍ನನ್ನು ಭೇಟಿ ಮಾಡಿದ ಅನಂತರ ಇವನಲ್ಲಿ ದೃಢ ನಿರ್ಧಾರ ಮೂಡಿತು. ಈತ ತನ್ನ ಜೇಬಿನಲ್ಲಿ ಸದಾ ನಂ.25ನ್ನು ಇಟ್ಟುಕೊಂಡಿರುತ್ತಿದ್ದ. ಬಿ.ಎ. ಪದವಿ ಪಡೆಯುವ ವೇಳೆಗೆ 25 ಅಡಿ ಉದ್ದ ಜಿಗಿಯಬೇಕೆಂಬುದು ಇವನ ಗುರಿಯಾಗಿತ್ತು. ಪೂಮಾ, ಅಡಿಡಾಸ್ ಕಂಪೆನಿಗಳು ಇವನ ಸಾಮಥ್ರ್ಯವನ್ನು ಅಂದಾಜು ಮಾಡಿ ಹೈಸ್ಕೂಲು ಓದುತ್ತಿರುವಾಗಲೇ ಷೂಗಳನ್ನೂ ಇತರ ಉಪಕರಣಗಳನ್ನೂ ನೀಡಿದುವು. ಕಾಲೇಜಿನಲ್ಲಿರುವಾಗಲೇ ನೈಕ್ ಕಂಪನಿಯೊಡನೆ ಬೃಹತ್ ಮೊತ್ತದ ಒಪ್ಪಂದಕ್ಕೆ ಸಹಿಹಾಕಿದ.

	ಟಾಂ ಟೆಲೆಜ಼್ ಇವನ ಕೋಚ್. ದೂರಜಿಗಿತಕ್ಕೆ ಹೊಸದೊಂದು ವಿಧಾನ ವನ್ನು ಅಳವಡಿಸಿಕೊಳ್ಳು ವಂತೆ ಮಾಡಿದ. ‘ಡಬಲ್ ಹಿಟ್ ಕಿಕ್, ಎಂಬುದೇ ಈ ವಿಧಾನ. ತೋಳು-ಕಾಲುಗಳನ್ನು ಗಾಳಿಯಲ್ಲಿ ಹಾರುತ್ತಿರುವಂತೆ ಹಿಂದೊತ್ತಿ ಜಿಗಿಯುವುದೇ ಈ ವಿಧಾನದ ವೈಶಿಷ್ಟ್ಯ. ಇದರಿಂದ ಅಲ್ಪಾವಧಿಯಲ್ಲಿ ಈತ 27 ಅಡಿ ಜಿಗಿಯಬಲ್ಲ ವನಾಗಿದ್ದ. ಪ್ರಪಂಚದ ಅತ್ಯುತ್ತಮ 100 ಮೀ ಓಟಗಾರನಾದ(1980). ಜೆಸ್ಸಿ ಓವೆನ್ಸ್ ನಂತೆಯೇ ಉದ್ದ ಜಿಗಿತ ಮತ್ತು 100 ಮೀ ಓಟದ ಸ್ಪರ್ಧಿಯಾದ ಈತನನ್ನು ಅವನೊಂದಿಗೆ ಹೋಲಿಸಲಾರಂಭಿಸಿದರು. 

	ಈತ ಅಮೆರಿಕ ಒಲಿಂಪಿಕ್ಸ್ ತಂಡಕ್ಕೆ ಆಯ್ಕೆಯಾದ(1980). ಆದರೆ ಸೋವಿಯತ್ ಒಕ್ಕೂಟ ಆಫ್ಘಾನಿಸ್ತಾನವನ್ನು ಆಕ್ರಮಿಸಿತೆಂದು ಅಮೆರಿಕ ದೇಶ ಒಲಿಂಪಿಕ್ಸ್ ಅನ್ನು ಬಹಿಷ್ಕರಿಸಿತು. ಅನಂತರ ಈತ ಒಳಾಂಗಣ ಉದ್ದ ಜಿಗಿತದಲ್ಲಿ 27 ಅಡಿ 101/4 ಅಂಗುಲ ಹಾರಿ ಪ್ರಪಂಚದಾಖಲೆ ಸ್ಥಾಪಿಸಿದ (1981). ಲಾಸ್ ಏಂಜಲೀಸ್ ಒಲಿಂಪಿಕ್ಸ್‍ನಲ್ಲಿ 4 ಚಿನ್ನದ ಪದಕಗಳನ್ನು ಗೆದ್ದುಕೊಂಡು ಜೆಸ್ಸಿಓವೆನ್ಸ್‍ನ 1936ರ ಬರ್ಲಿನ್ ಸಾಧನೆ ಸರಿಗಟ್ಟಿದ (1984). ಅನೇಕ ಕ್ರೀಡಾಪಟುಗಳು ಉದ್ದೀಪನ ಮದ್ದು ಬಳಸುತ್ತಿದ್ದಾರೆಂಬ ಸತ್ಯವನ್ನು ಬಹಿರಂಗಗೊಳಿಸಿದ (1987). ಸಿಯೋಲ್ ಒಲಿಂಪಿಕ್ಸ್‍ನಲ್ಲಿ 2 ಚಿನ್ನ ಮತ್ತು 1 ಬೆಳ್ಳಿ ಪದಕಗಳನ್ನು ಗೆದ್ದ (1988). ಮರುವರ್ಷ ಕ್ರೀಡಾಪಟುಗಳ ಉದ್ದೀಪನ ಮದ್ದು ಬಳಕೆಯ ಬಗೆಗೆ ಸಾಕ್ಷ್ಯಾಧಾರಗಳನ್ನೊದಗಿಸಿದ. 	ಟೋಕಿಯೊ ವಿಶ್ವ ಚಾಂಪಿಯನ್‍ಷಿಪ್‍ನಲ್ಲಿ 9.86 ಸೆಕೆಂಡ್‍ಗಳಲ್ಲಿ ಗುರಿಮುಟ್ಟಿ 100 ಮೀ ಓಟದ ದಾಖಲೆಯನ್ನು ಮುರಿದ (1991). ಉದ್ದ ಜಿಗಿತದಲ್ಲಿ ಸೋಲನ್ನುಂಡ. ಬಾರ್ಸಿಲೋನ ಒಲಿಂಪಿಕ್ಸ್‍ನಲ್ಲಿ ಉದ್ದಜಿಗಿತದ (ಲಾಂಗ್‍ಜಂಪ್) ಚಿನ್ನದ ಪದಕವನ್ನು ಗೆದ್ದುಕೊಂಡ (1992). ಅಟ್ಲಾಂಟ ಒಲಿಂಪಿಕ್ಸ್‍ನಲ್ಲಿ ನಾಲ್ಕನೆಯ ಬಾರಿ ಉದ್ದಜಿಗಿತದ ಚಿನ್ನದ ಪದಕ ವಿಜೇತನಾದ (1996). ಅನಂತರ ವೃತ್ತಿಪರ ಕ್ರೀಡೆಯಿಂದ ನಿವೃತ್ತನಾದ (1997). 

	ಈತ ಚಲನಚಿತ್ರಗಳಲ್ಲೂ ನಟಿಸಿದ; ಆದರೆ ಯಶ ಕಾಣಲಿಲ್ಲ. ತಂದೆ ತೀರಿಕೊಂಡಾಗ 100 ಮೀ ಓಟದ ಚಿನ್ನದ ಪದಕವನ್ನು ಅವನ ಶವಪೆಟ್ಟಿಗೆಯಲ್ಲಿಟ್ಟು ಗೌರವಿಸಿ, ಮತ್ತೊಂದನ್ನು ಗೆದ್ದುಕೊಳ್ಳು ವುದಾಗಿ ಪಣತೊಟ್ಟ (1987). ಈತ ಈಗ ಲಾಸ್‍ಏಂಜಲಿಸ್‍ನಲ್ಲಿ ಹೋಸ್ಟನ್ ರೆಸ್ಟೊರೆಂಟ್‍ನ ಸಹ - ಒಡೆಯನೂ ತನ್ನದೇ ಬ್ರಾಂಡ್‍ನ ಎಸ್.ಎಂ.ಟಿ.ಸಿ. (ಸಾಂತ ಮೊನಿಕಾ ಟ್ರಾಕ್ ಕ್ಲಬ್) ಕ್ರೀಡಾ ಉಡುಪು-ಉಪಕರಣಗಳ ಮಳಿಗೆಯ ಮಾಲಿಕನೂ ಆಗಿದ್ದಾನೆ. ಇನ್‍ಸೈಡ್ ಟ್ರ್ಯಾಕ್ ಎಂಬುದು ಈತನ ಆತ್ಮಚರಿತ್ರೆ. 

ಇವನಿಗೆ ಅನೇಕ ಪ್ರಶಸ್ತಿಗಳು ಬಂದಿವೆ. ಜೆಸ್ಸಿ ಓವನ್ಸ್ ಪ್ರಶಸ್ತಿ (1985), 20ನೆಯ ಶತಮಾನದ ಅತ್ಯುತ್ತಮ ಅಮೆರಿಕನ್ ಒಲಿಂಪಿಕ್ ಪಟು ಪ್ರಶಸ್ತಿ (1999) ಮುಖ್ಯವಾದವು. ಅನಂತರ ಈತ ನ್ಯಾಷನಲ್ ಟ್ರ್ಯಾಕ್ ಅಂಡ್ ಫೀಲ್ಡ್ ಹಾಲ್ ಆಫ್ ಫೇಮ್‍ಗೆ (2001) ಸೇರ್ಪಡೆಗೊಂಡ. 100ಮೀ ಹಾಗೂ 200ಮೀ ಓಟ ಹಾಗೂ ಉದ್ದಜಿಗಿತಗಳಲ್ಲಿ ಗೆಲುವು ಸಾಧಿಸಿದಾತ ಎಂಬ ಹೆಗ್ಗಳಿಕೆಗೆ ಪಾತ್ರನಾದ.	
						
	(ಡಿ.ಎನ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ